UPI ಎಂಡಿಆರ್: ಶುಲ್ಕವನ್ನು ತಪ್ಪಿಸಲು ವ್ಯಾಪಾರಿಗಳು 6,000 ರೂ.ಗಳ ಬಿಲ್ ಅನ್ನು ತಲಾ 2,000 ರೂ.ಗಳಂತೆ ಮೂರು ಸಲ ಸ್ವೀ
UPI ಎಂಡಿಆರ್: ಶುಲ್ಕವನ್ನು ತಪ್ಪಿಸಲು ವ್ಯಾಪಾರಿಗಳು 6,000 ರೂ.ಗಳ ಬಿಲ್ ಅನ್ನು ತಲಾ 2,000 ರೂ.ಗಳಂತೆ ಮೂರು ಸಲ ಸ್ವೀಕರಿಸಬಹುದೇ?
- By aaa --
- Sunday, 20 Sep, 2026
ಹೊಸದಿಲ್ಲಿ: ಅಕ್ಟೋಬರ್ 15ರಿಂದ ದೊಡ್ಡ ವ್ಯಾಪಾರಿಗಳಿಗೆ ಮಾಡುವ 2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇಕಡಾ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ವಯವಾಗಲಿದೆ. ಆದಾಗ್ಯೂ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್...
\nಹೊಸದಿಲ್ಲಿ: ಅಕ್ಟೋಬರ್ 15ರಿಂದ ದೊಡ್ಡ ವ್ಯಾಪಾರಿಗಳಿಗೆ ಮಾಡುವ 2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇಕಡಾ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ವಯವಾಗಲಿದೆ. ಆದಾಗ್ಯೂ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸದ್ಯಕ್ಕೆ ಒಂದೇ ವ್ಯಾಪಾರಿಗೆ ಪುನರಾವರ್ತಿತ ಯುಪಿಐ ಪಾವತಿಗಳ ಮೇಲೆ ಯಾವುದೇ ಪ್ರತ್ಯೇಕ ದೈನಂದಿನ ಮಿತಿಯನ್ನು ವಿಧಿಸುವ ಯೋಜನೆ ಹೊಂದಿಲ್ಲ.
ವ್ಯವಹಾರದಲ್ಲಿ ಇಂತಹ ನಿರ್ಬಂಧಗಳು ಇಲ್ಲದಿರುವುದರಿಂದ ದೊಡ್ಡ ಮೊತ್ತದ ಬಿಲ್‌ಗಳನ್ನು 2,000 ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತಗಳನ್ನಾಗಿ ಸ್ವೀಕರಿಸುವ ಮೂಲಕ ವ್ಯಾಪಾರಿಗಳು ಹೊಸ ನಿಯಮದಿಂದ ತಪ್ಪಿಸಿಕೊಳ್ಳಬಹುದು. ಉದಾಹರಣೆಗೆ 6,000 ರೂ.ಗೆ 2,000 ರೂ.ಗಳಂತೆ ಮೂರು ಪ್ರತ್ಯೇಕ ಪಾವತಿಗಳನ್ನು ಸ್ವೀಕರಿಸುವ ಮೂಲಕ ಎಂಡಿಆರ್ ಶುಲ್ಕವನ್ನು ಸಂಪೂರ್ಣವಾಗಿ ತಪ್ಪಿಸಬಹುದು.
ಎನ್‌ಪಿಸಿಐ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಲ್ಲಿ ಒಂದೇ ಬಿಲ್‌ಗೆ ಸಂಬಂಧಿಸಿದ ಬಹು ಪಾವತಿಗಳನ್ನು ಕಡ್ಡಾಯವಾಗಿ ಒಟ್ಟುಗೂಡಿಸಬೇಕು ಎಂಬ ಯಾವುದೇ ನಿಯಮವಿಲ್ಲ. ಗ್ರಾಹಕರು ಮತ್ತು ವ್ಯಾಪಾರಿಗಳ ಪರಸ್ಪರ ಒಪ್ಪಿಗೆಯ ಮೇರೆಗೆ ಈ ರೀತಿ ಹಣ ಪಾವತಿಸಿದರೆ ವಹಿವಾಟಿನ ಹಂತದಲ್ಲಿ ಇದನ್ನು ತಡೆಯುವುದು ಕಷ್ಟವಾದರೂ ಇದು ದೀರ್ಘಕಾಲದವರೆಗೆ ಪ್ರಚಲಿತದಲ್ಲಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಸಂಭಾವ್ಯ ಲೋಪವು ಸಣ್ಣ ವ್ಯಾಪಾರಿಗಳಿಗಾಗಿ ಇರುವ ಝೀರೋ-ಎಂಡಿಆರ್ ಪರ್ಸನ್ -ಟು-ಪರ್ಸನ್-ಮರ್ಚಂಟ್ (ಪಿ2ಪಿಎಂ) ವರ್ಗಕ್ಕೆ ಸಂಬಂಧಿಸಿದೆ.. ಸಣ್ಣ ವ್ಯಾಪಾರಿಗಳ ಮಾಸಿಕ ಸಂಗ್ರಹವು ಸತತ ಮೂರು ತಿಂಗಳುಗಳವರೆಗೆ 1 ಲಕ್ಷ ರೂ.ದಾಟಿದರೆ ಅವರನ್ನು ನಿಯಮಿತ ವರ್ಗಕ್ಕೆ ಸೇರಿಸಲಾಗುತ್ತದೆ, ಆದರೆ ಈ ಸಂಗ್ರಹಣೆಯನ್ನು ವಿವಿಧ ಬ್ಯಾಂಕ್ ಖಾತೆಗಳು ಅಥವಾ ಕ್ಯೂಆರ್ ಕೋಡ್‌ಗಳಾದ್ಯಂತ ಒಟ್ಟುಗೂಡಿಸಬೇಕೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.
ಈ ಮಿತಿಯಿಂದ ತಪ್ಪಿಸಿಕೊಳ್ಳಲು ವ್ಯಾಪಾರಿಗಳು ತಮ್ಮ ಆದಾಯವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಂಚಿಕೆ ಮಾಡಬಹುದು. ಇಂತಹ ಅನಧಿಕೃತ ಚಟುವಟಿಕೆಗಳನ್ನು ಪತ್ತೆ ಹಚ್ಚಬೇಕಾದರೆ ವಿಭಿನ್ನ ಖಾತೆಗಳು ಮತ್ತು ಪಾವತಿ ಚಾನೆಲ್‌ಗಳನ್ನು ನಿರ್ದಿಷ್ಟ ಒಂದೇ ವ್ಯವಹಾರಕ್ಕೆ ಜೋಡಿಸುವುದು ಅನಿವಾರ್ಯವಾಗುತ್ತದೆ.
ವ್ಯಾಪಾರಿಗಳು ಯುಟಿಲಿಟಿ ಹಾಗೂ ಇಂಧನ ಕ್ಷೇತ್ರಗಳಂತೆ ಕಡಿಮೆ ಶುಲ್ಕವಿರುವ ವರ್ಗಗಳಲ್ಲಿ ತಪ್ಪಾಗಿ ನೋಂದಾಯಿಸಿಕೊಳ್ಳಬಹುದು. ಅಲ್ಲದೆ, ಸಾಮಾನ್ಯ ಮಾರಾಟವನ್ನು ಶುಲ್ಕ ವಿನಾಯಿತಿ ಇರುವ ಮರುಕಳಿಸುವ ‘ಯುಪಿಐ ಆಟೋ ಪೇ’ ವಹಿವಾಟುಗಳೆಂದು ತಪ್ಪಾಗಿ ಬಿಂಬಿಸುವುದು ಅಥವಾ ವಾಣಿಜ್ಯ ಪಾವತಿಗಳನ್ನು ವೈಯಕ್ತಿಕ ಯುಪಿಐ ಐಡಿಗಳಿಗೆ ಸ್ವೀಕರಿಸುವುದು ನಿಯಮ ಉಲ್ಲಂಘನೆಯಾಗಿದ್ದು, ಖಾತೆಗಳ ಮರುವರ್ಗೀಕರಣಕ್ಕೆ ಕಾರಣವಾಗಬಹುದು.
ಹೊಸ ಪಾವತಿ ವ್ಯವಸ್ಥೆ ಜಾರಿಗೆ ಬಂದ ನಂತರ ಕೆಲವು ವ್ಯಾಪಾರಿಗಳು ಇಂತಹ ಉಪಾಯಗಳನ್ನು ಹುಡುಕಿಕೊಳ್ಳಬಹುದು ಎಂದು ಎನ್‌ಪಿಸಿಐ ನಿರೀಕ್ಷಿಸಿದೆ. ಆದರೂ, ಸದ್ಯಕ್ಕೆ ಯಾವುದೇ ಹೆಚ್ಚುವರಿ ವಹಿವಾಟು ಮಿತಿಗಳ ಅಗತ್ಯವಿಲ್ಲವೆಂದು ಅದು ಭಾವಿಸಿದೆ. ಶೇ.95ಕ್ಕೂ ಹೆಚ್ಚು ವಹಿವಾಟುಗಳು ಉಚಿತವಾಗಿ ಮುಂದುವರಿಯಲಿದ್ದು, ಸಂಗ್ರಹವಾಗುವ ಎಂಡಿಆರ್ ಆದಾಯವನ್ನು ಯುಪಿಐ ಮೂಲಸೌಕರ್ಯ ಮತ್ತು ಸೌಲಭ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಎನ್‌ಪಿಸಿಐ ಹೇಳಿದೆ.


