ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಜರುಗಿದ ಅಂತರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಜರುಗಿದ ಅಂತರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ
- By aaa --
- Tuesday, 22 Sep, 2026
ಧಾರವಾಡ (ಕರ್ನಾಟಕ ವಾರ್ತೆ) ಸೆ.21: ಭಾರತದಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ವಿಶ್ವದಲ್ಲೇ ಅತೀ ಹೆಚ್ಚು, ಹಾವು ಕಡಿತದ ಸಾವುಗಳು ಸಂಭವಿಸುವ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ರೈತರು, ಕಾರ್ಮಿಕರು ಮತ್ತು ಮಕ್ಕಳು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ ಅವರು ತಿಳಿಸಿದರು.
ಅವರು ಇಂದು (ಸೆ.21) ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಐ.ಇ.ಸಿ. ವಿಭಾಗ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಧಾರವಾಡ ವತಿಯಿಂದ ನಡೆದ ವಿಶ್ವ ಹಾವು ಕಡಿತ ಜಾಗೃತಿ ಕಾರ್ಯಕ್ರಮ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಾವು ಕಡಿತ ಜಾಗತಿಕ ಸಮಸ್ಯೆಯಾಗಿದ್ದು, ಜಗತ್ತಿನ ಎಲ್ಲ ದೇಶಗಳಲ್ಲೂ ಬಗೆ ಬಗೆಯ ಹಾವುಗಳಿದ್ದು, ಅವುಗಳ ಕಡಿತವೂ ಸಾಮಾನ್ಯ, ಆದರೆ ವಿಶ್ವದಲ್ಲಿ ಹಾವು ಕಡಿತದ ರಾಷ್ಟ್ರ ಎಂದು ಕರೆಯುವುದು ಭಾರತವನ್ನು ಮಾತ್ರ ಎಂದರು.
ಇತರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಹಾವುಗಳ ಸಂಖ್ಯೆ ಅಧಿಕ ಇದರೊಟ್ಟಿಗೆ ಜಾಗೃತಿ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆಯೂ ಏರಿಕೆಯಾಗಿದ್ದು, ಇದರಿಂದ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರಣ ಪ್ರತಿ ವರ್ಷ ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನಾಗಿ ಆಚರಿಸಿ ಹಾವಿನ ಕಡಿತದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ನಾಗರಹಾವು, ಕೊಳಕುಮಂಡಲ ಹಾವು, ಕಟ್ಟು ಹಾವು, ಉರಿಮಂಡಲ ಹಾವು ಹೆಚ್ಚು ಅಪಾಯಕಾರಿ ಹಾವುಗಳಾಗಿವೆ. ಈ ನಾಲ್ಕು ಜಾತಿಯ ಹಾವುಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಜನ ವಸತಿ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುತ್ತವೆ ಹಾಗೂ ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಮೃತ ಪಡುತ್ತಿದ್ದಾರೆ. ಇವುಗಳ ಚಲನವಲನ, ಆಹಾರಪದ್ಧತಿ ಇತ್ಯಾದಿ ವಿಷಯಗಳ ಬಗ್ಗೆ ಮತ್ತು ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅರಿತರೆ ಸುಲಭವಾಗಿ ಪಾರಾಗಬಹುದು. ಯಾವ ಹಾವು ಅಪಾಯಕಾರಿ ಭಾರತದಲ್ಲಿ 300 ವಿಧದ ಹಾವುಗಳಿದ್ದು, ಅವುಗಳೆಲ್ಲವೂ ಅಪಾಯಕಾರಿಯಲ್ಲ, ಹಾಗಾಗಿ ದೇಶದಲ್ಲಿ ಹಾವು ಕಡಿತದಿಂದ ಮೃತ ಪಡುವವರಲ್ಲಿ ಶೇ 90 ಕ್ಕೂ ಅಧಿಕ ಜನರು 4 ಜಾತಿಯ ಹಾವುಗಳ ಕಡಿತದಿಂದ ಮಾತ್ರ ಮೃತಪಡುತ್ತಿದ್ದಾರೆ ಎಂದು ಹೇಳಿದರು.
ರೈತರು ದೇಶದ ಬೆನ್ನೆಲಬು ಆದ್ದರಿಂದ ಹಾವು ಕಡಿತದಿಂದ ಹೆಚ್ಚಾಗಿ ರೈತರು, ಕೂಲಿ ಕಾರ್ಮಿಕರು ಮೃತ ಪಡುತ್ತಿದ್ದು, ರಾತ್ರಿ ವೇಳೆ ಜಮೀನುಗಳಿಗೆ ಹೋದಾಗ ಕಡ್ಡಾಯವಾಗಿ ಟಾರ್ಚ್ ಲೈಟ್ ಮತ್ತು ಶೂಗಳನ್ನು ಬಳಸಬೇಕು ಹಾಗೂ ಸೂಕ್ತ ಕಳೆ, ಹುಲ್ಲುಗಾವಲು, ಅರಣ್ಯ ಪ್ರದೇಶ, ಜಮೀನಿನಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ ಬಳಸುವುದು ಸೂಕ್ತ. ಹಾವು ಕಚ್ಚಿದಾಗ, ಗಾಯವನ್ನು ಕತ್ತರಿಸುವುದು, ವಿಷವನ್ನು ಬಾಯಿಯಿಂದ ಹೀರುವುದು, ಗಾಯವನ್ನು ಸುಡುವುದು, ಬಿಗಿಯಾಗಿ ಹಗ್ಗ ಕಟ್ಟುವುದು ಅಥವಾ ಮನೆಮದ್ದು ಹಚ್ಚುವುದು ಮಾಡಬಾರದು. ಮಂತ್ರ-ತಂತ್ರದ ಅಥವಾ ಇತರ ಮೂಡನಂಬಿಕೆಯ ಚಿಕಿತ್ಸೆಗಾಗಿ ಸಮಯ ವ್ಯರ್ಥ ಮಾಡದೇ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರೆ ಹಾವು ಕಚ್ಚಿದವರು ಬದುಕುಳಿಯುತ್ತಾರೆ ಎಂದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಮಹೇಶ ಚಿತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಾವು ಕಡಿತದ ಅಪಾಯಗಳು, ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಹಾಗೂ ತಪ್ಪು ಕಲ್ಪನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಯಾದ ಸಿನಿಯರ್ ಸ್ಪೆಶಲಿಸ್್ಟ ರಮೇಶ ಭಜಂತ್ರಿ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಶಶಿಧರ ಕಳಸೂರಮಠ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ರವೀಂದ್ರ ಬೊವೇರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಮಂಜುನಾಥ ಸೊಪ್ಪಿನಮಠ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ ಸಂಜಯ ಡುಮ್ಮಗೋಳ, ಡಾ. ಕಿರಣ ಕುಲಕರ್ಣಿ ಜಿಲ್ಲಾ ಆಸ್ಪತ್ರೆ, ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ ಉಪಸ್ಥಿತರಿದ್ದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್ ಅಗಡಿ ಸ್ವಾಗತಿಸಿದರು, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ ತಿವಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Source: email://1a0c583ecaa7d1e0


