Jatayu Newspaper
ಎಫ್ಟಿಕೆ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ನಿಯಮಿತವಾಗಿ ನಡೆಸಲು ಸೂಚನೆ:- ಸಿಇಓ ಭುವನೇಶ ಪಾಟೀಲ್ ಎಫ್ಟಿಕೆ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ನಿಯಮಿತವಾಗಿ ನಡೆಸಲು ಸೂಚನೆ:- ಸಿಇಓ ಭುವನೇಶ ಪಾಟೀಲ್
Tuesday, 22 Sep 2026 05:30 am
Jatayu Newspaper

Jatayu Newspaper

ಧಾರವಾಡ (ಕರ್ನಾಟಕ ವಾರ್ತೆ) ಸೆ.21: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ತಿಂಗಳ ನಿಗದಿತ ಗುರಿಯನ್ನು ಸಾಧಿಸಲು ನೀರು ಪರೀಕ್ಷಿಸುವ ಕಿಟ್ (FTK) ಮೂಲಕ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಕಾರ್ಯವನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.

ಅವರು ಇಂದು (ಸೆ.21) ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಕಾರ್ಯ ನಿರ್ವಾಹಕ ಇಂಜಿನೀಯರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವಚ್ಛಭಾರತ ಮಿಷನ್(ಗ್ರಾ) (ಎಸ್.ಬಿ.ಎಮ್.-ಜಿ) ಹಂತ 2 ಮತ್ತು ಜಲಜೀವನ ಮಿಷನ್ ಯೋಜನೆಗಳ ಸಮಗ್ರ ಅನುಷ್ಠಾನಕ್ಕಾಗಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಭೆಯನ್ನು ಜರುಗಿಸಿ, ಮಾತನಾಡಿದರು.

ಎಲ್ಲಾ ತಾಲೂಕುಗಳ ಇಓಗಳು, ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇಗಳು ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಶಾಖಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಪ್ರತಿ ತಿಂಗಳು ನಿಗದಿಪಡಿಸಿರುವ ಗುರಿಯಂತೆ ಎಫ್ಟಿಕೆ ಕಿಟ್ ಮೂಲಕ ನೀರಿನ ಮಾದರಿಗಳನ್ನು ಪರೀಕ್ಷಿಸಬೇಕು. ಎಫ್ಟಿಕೆ ಕಿಟ್ ಮೂಲಕ ನಡೆಸಿದ ಪರೀಕ್ಷೆಯಲ್ಲಿ ಯಾವುದೇ ನೀರಿನ ಮಾದರಿಯಲ್ಲಿ ಕಲುಷಿತ ಅಂಶ ಅಥವಾ ಕಂಟಾಮಿನೇಶನ್ ಕಂಡುಬಂದರೆ, ಅಂತಹ ಮಾದರಿಗಳನ್ನು ಜಿಲ್ಲಾ ಮಟ್ಟದ ರಾಸಾಯನಿಕ ಪ್ರಯೋಗಾಲಯಕ್ಕೆ ಕಳುಹಿಸಿ, ಪುನಃ ಪರೀಕ್ಷೆ ಮಾಡಿಸಬೇಕು. ಪ್ರಯೋಗಾಲಯದಿಂದ ಬಂದ ವರದಿಯನ್ನು ಪರಿಶೀಲಿಸಿ, ನೀರಿನ ಗುಣಮಟ್ಟದಲ್ಲಿ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಪ್ರತಿ ತಿಂಗಳು ಓಎಚ್ಟಿ (OHT) ಸ್ವಚ್ಛಗೊಳಿಸಲು ಸೂಚನೆ: ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಲ್ಲಿ ಪ್ರಮುಖವಾಗಿರುವ ಮೇಲ್ಮಟ್ಟದ ನೀರು ಸಂಗ್ರಹಣಾ ಟ್ಯಾಂಕ್ಗಳನ್ನು ಕಡ್ಡಾಯವಾಗಿ ಪ್ರತಿ ತಿಂಗಳು ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಓಎಚ್ಟಿಗಳ ಸ್ವಚ್ಛತೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಬಾರದು.

ನೀರು ಪೂರೈಕೆಗೆ ಸಂಬಂಧಿಸಿದ ಆಸ್ತಿ ನಿರ್ವಹಣೆ (ಅಸೆಟ್ ಮ್ಯಾನೇಜ್ಮೆಂಟ್) ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದಾಗ ಧಾರವಾಡ ತಾಲೂಕಿನಲ್ಲಿ ಪ್ರಗತಿ ಕುಂಠಿತವಾಗಿರುವುದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಉಳಿದ ಎಲ್ಲಾ ತಾಲೂಕುಗಳಲ್ಲಿಯೂ ಓಎಚ್ಟಿಗಳ ಸ್ವಚ್ಛತೆ ಕಾರ್ಯವನ್ನು ಪ್ರತಿ ತಿಂಗಳು ಪೂರ್ಣಗೊಳಿಸಿ, ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಟಾಸ್ಕ್ಫೋರ್ಸ್ ಕಾಮಗಾರಿಗಳ ಬಿಲ್ ಪಾವತಿ ಪೂರ್ಣಗೊಳಿಸಲು ಸೂಚನೆ: ಕುಡಿಯುವ ನೀರು ಪೂರೈಕೆ (DWS) ಅಡಿಯಲ್ಲಿ 2026-27ನೇ ಸಾಲಿನ ಟಾಸ್ಕ್ಫೋರ್ಸ್ ಯೋಜನೆಯಡಿ ಅನುಮೋದನೆಗೊಂಡಿರುವ ಕಾಮಗಾರಿಗಳ ಬಿಲ್ ಪಾವತಿ ಪ್ರಕ್ರಿಯೆಯನ್ನು ಮುಂದಿನ ತಿಂಗಳಾಂತ್ಯದೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿಗಳ ಬಿಲ್ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದಲ್ಲಿ, ಅದಕ್ಕೆ ಸಂಬಂಧಪಟ್ಟ ಶಾಖಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಅನುಮೋದನೆಗೊಂಡಿರುವ ಕಾಮಗಾರಿಗಳ ಪ್ರಗತಿ ಹಾಗೂ ಬಿಲ್ ಪಾವತಿ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಿ, ಯಾವುದೇ ವಿಳಂಬವಾಗದಂತೆ ಕ್ರಮ ವಹಿಸಬೇಕೆಂದು ಹೇಳಿದರು.

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ, ಓಎಚ್ಟಿಗಳ ಸ್ವಚ್ಛತೆ, ನೀರು ಪೂರೈಕೆ ವ್ಯವಸ್ಥೆಯ ಆಸ್ತಿ ನಿರ್ವಹಣೆ ಹಾಗೂ ಟಾಸ್ಕ್ಫೋರ್ಸ್ ಕಾಮಗಾರಿಗಳ ಅನುಷ್ಠಾನ ಸೇರಿದಂತೆ ಎಲ್ಲ ಕಾರ್ಯಗಳನ್ನು ಇಓಗಳು, ಎಇಇಗಳು ಹಾಗೂ ಸೆಕ್ಷನ್ ಆಫೀಸರ್ಗಳು ಪರಸ್ಪರ ಸಮನ್ವಯದಿಂದ ನಿರ್ವಹಿಸಬೇಕು. ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಮುಂದಿನ ತಿಂಗಳೊಳಗೆ 26 ಹಳ್ಳಿಗಳಿಗೆ ಭಾಗಶಃ ನೀರು ಪೂರೈಕೆ ಪ್ರಾರಂಭಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಎಲ್ & ಟಿ ಲಿಮಿಟೆಡ್ ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯ ಕಾಮಗಾರಿಗಳ ಗುಣಮಟ್ಟ ಹಾಗೂ ಪ್ರಗತಿಯ ವೇಗದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಎದುರಾಗುತ್ತಿರುವ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಿ, ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯನಿರ್ವಾಹಕ ಇಂಜಿನಿಯರ ಜಗದೀಶ ಪಾಟೀಲ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ವಾಯ್. ಸಾವಂತ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Source: email://1a0ca822615aa103